ಶನಿವಾರ, ಮೇ 13, 2017

ಬೆಂಗಳೂರಿನ ಪತ್ರಕರ್ತ ಸಿ ಟಿ ಜೋಶಿಯವರ “ಸುದ್ದಿಗಾಗಿ ಸ್ವಾಭಿಮಾನದ ಬಲಿ?” ಗ್ರಂಥ ಬಿಡುಗಡೆ

ಇಂದಿನ ಮಾಧ್ಯಮ: ಒಂದು ಇಣುಕು ನೋಟ
ಇಂದಿನ ಮಾಧ್ಯಮದ (ಮುದ್ರಣ ಹಾಗೂ ವಿದ್ಯುನ್ಮಾನ ಎರಡೂ) ಬಗೆಗೆ ಆಳವಾದ, ನಿರ್ವಿಕಾರವಾದ ವಿಚಾರ ವಿನಿಮಯ ನಡೆಸಲು, ಅನುಭವಗಳನ್ನು ಹಂಚಿಕೊಳ್ಳಲು ಅದೊಂದು ಸಂದರ್ಭವಾಗಿತ್ತು. ಕಳೆದ ಹಲವಾರು ದಶಕಗಳಲ್ಲಿ ಭಾರತೀಯ ಮಾಧ್ಯಮರಂಗ ಗುರುತಿಸಲಾರದಷ್ಟು ಅಜಗಜಾಂತರ ವ್ಯತ್ಯಾಸ ಹೊಂದಿದೆ ಎಂಬುದು ಅದರಲ್ಲಿ ಭಾಗವಹಿಸಿದವರ ಅಭಿಪ್ರಾಯವಾಗಿತ್ತು.


ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸುತ್ತಿರುವ ದೃಶ್ಯ

'ಮಾಧ್ಯಮದಲ್ಲಿ ಮುಂದಿನ ಆರೋಗ್ಯಕರ ಬೆಳವಣಿಗೆಗೆ ಅನುಕೂಲಕರವಾದ ಸಕಾರಾತ್ಮಕ ಬದಲಾವಣೆಗಳಿವೆ. ಆದರೆ ಅಷ್ಟೇ (ಬಹುಶಃ ಇನ್ನೂ ಹೆಚ್ಚು) ನಕಾರಾತ್ಮಕವಾದ, ಅದರ ಮುಂದಿನ ಏಳಿಗೆಗೆ ಪ್ರತಿಕೂಲಕರವಾದ ಬದಲಾವಣೆಗಳೂ ಇವೆ. ಸ್ವಾತಂತ್ರ್ಯಪೂರ್ವ ನಮ್ಮ ಮಾಧ್ಯಮಕ್ಕೆ ಒಂದು ಉದಾತ್ತ ಧ್ಯೇಯೋದ್ದೇಶವಿತ್ತು. ತದನಂತರ ಅದು ಸಂಪರ್ಕ ಹಾಗೂ ಮಾಹಿತಿ ಪ್ರಸಾರದ ಸಮೂಹ ಸಾಧನವಾಯಿತು. ಈಗ ಅದು ಅಪ್ಪಟ ವ್ಯಾಪಾರವಾಗಿದೆ' ಎಂದು ಪ್ರತ್ಯೇಕ ಭಾಷಣಗಳಲ್ಲಿ ವೇದಿಕೆಯನ್ನಲಂಕರಿಸಿದ ಗಣ್ಯರೆಲ್ಲರೂ ಒಮ್ಮತದಿಂದ ನುಡಿದು, ಮಾಧ್ಯಮರಂಗ ಮತ್ತೆ ತನ್ನ ಮೊದಲಿನ ಉಚ್ಛ್ರಾಯದ ದಿನಗಳನ್ನು ನೋಡುವ ಸಮಯ ಬಂದೇ ಬರುವುದೆಂಬ ಭರವಸೆ ವ್ಯಕ್ತ ಪಡಿಸಿದರು.

ಬೆಂಗಳೂರಿನ ಪತ್ರಕರ್ತ ಸಿ ಟಿ ಜೋಶಿಯವರು ಬರೆದ “ಸುದ್ದಿಗಾಗಿ ಸ್ವಾಭಿಮಾನದ ಬಲಿ?” ಕನ್ನಡ ಪುಸ್ತಕದ ವೈಭವಪೂರ್ಣ ಹಾಗೂ ಘನತೆಯ ಲೋಕಾರ್ಪಣೆಗೊಳಿಸಿದ ಸಂದರ್ಭವದು. ಇಂದಿನ ಮಾಧ್ಯಮರಂಗದ ಸಮಗ್ರವಾದ, ವಸ್ತುನಿಷ್ಠವಾದ ಸಿಂಹಾವಲೋಕನಕ್ಕೆ ಸೀಮಿತವಾದ ಗ್ರಂಥವದು.


ವೇದಿಕೆಯ ಮೇಲೆ ಸಿ.ಟಿ.ಜೋಶಿ, ಬಿ.ಎನ್.ಗರುಡಾಚಾರ್, ಸಿ.ಎಂ.ರಾಮಚಂದ್ರ, 
ರಾಮ ಜೋಯಿಸ್, ಎಚ್.ಎನ್.ಸುರೇಶ, ಬಿ.ಕೆ.ರವಿ, 
ಜಿ.ಗೌತಮ್ ಹಾಗೂ ಹರಿಶ್ಚಂದ್ರ ಭಟ್.

ಲೋಕಾರ್ಪಣೆ ಸಮಾರಂಭವನ್ನು ಪ್ರಕಾಶನ ಸಂಸ್ಥೆ ಯುರೇಕಾ ಪಬ್ಲಿಕೇಶನ್ ಹಾಗೂ ಭಾರತೀಯ ವಿದ್ಯಾ ಭವನ, ಮೇ 9, 2017 ರಂದು ಜಂಟಿಯಾಗಿ ಆಯೋಜಿಸಿದ್ದವು.

ಈ ಸಮಾರಂಭದ ಮುಖ್ಯ ಅತಿಥಿ ಪೀಠವನ್ನು ಜಾರ್ಖಂಡ ರಾಜ್ಯದ ಹಿಂದಿನ ರಾಜ್ಯಪಾಲರೂ, ಪಂಜಾಬ - ಹರಿಯಾಣಾ ಪ್ರಮುಖ ನ್ಯಾಯಾಲಯದ ಹಿಂದಿನ ಮುಖ್ಯ ನ್ಯಾಯಾಧೀಶರೂ ಆದ ಜಸ್ಟಿಸ್ ರಾಮ ಜೋಯಿಸ್ ಅಲಂಕರಿಸಿದ್ದರು. ವೇದಿಕೆಯ ಮೇಲಿದ್ದ ಇತರ ಗಣ್ಯರೆಂದರೆ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಹಾಗೂ ಅದರ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಬಿ ಕೆ ರವಿ, ಪುಸ್ತಕಕ್ಕೆ ಮುನ್ನುಡಿ ಬರೆದ ಬಿ ಎನ್ ಗರುಡಾಚಾರ್ (ಕರ್ನಾಟಕದ ಹಿಂದಿನ ಪೊಲೀಸ್ ಮಹಾ ನಿರ್ದೇಶಕರು), ಹಾಗೂ ಗೌರವಾನ್ವಿತ ಪತ್ರಕರ್ತ-ಲೇಖಕ ಸಿ ಎಮ್ ರಾಮಚಂದ್ರ ಅವರು. ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್ ಎನ್ ಸುರೇಶ ಅಧ್ಯಕ್ಷತೆ ವಹಿಸಿದ್ದರು.


ಸಿ ಟಿ ಜೋಶಿಯವರು ಮಾತನಾಡುತ್ತಿರುವುದು

ಜೋಶಿಯವರು ತಮ್ಮ ಹಾಗೂ ತಮ್ಮ ಸಹೋದ್ಯೋಗಿಗಳ ವೃತ್ತಿ ಜೀವನದಲ್ಲಿ ನಡೆದಿರುವ ಅನೇಕ ಘಟನೆ-ಪ್ರಸಂಗಗಳನ್ನು ಉಲ್ಲೇಖಿಸಿ ಮಾಧ್ಯಮ ರಂಗದ ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳವಣಿಗೆಗಳನ್ನು ವಿವರಿಸಿದರು. ಪ್ರಕಾಶಕ ಜಿ. ಗೌತಮ್ ಸ್ವಾಗತಿಸಿದರು. ಹೆಸರಾಂತ ಚಲನಚಿತ್ರ ನಿರ್ದೇಶಕ ಎಸ್ ಎ ರವೀಂದ್ರನಾಥ್ ನಿರೂಪಣೆ ಮಾಡಿದರು. ಹಿರಿಯ ಪತ್ರಕರ್ತ ಬಿ ಹರಿಶ್ಚಂದ್ರ ಭಟ್ ಪುಸ್ತಕಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ, ವಂದನಾರ್ಪಣೆ ಸಲ್ಲಿಸಿದರು.

ಪುಸ್ತಕದಲ್ಲಿ ಬಂದಿರುವ ಕೆಲವು ಪ್ರಮುಖ ವಿಷಯ-ವಿಚಾರ-ಅನಿಸಿಕೆಗಳು:

ನಿಖರವಾದ, ಯಥಾರ್ಥವಾದ, ಹಾಗೂ ಸಮಗ್ರವಾದ ವಸ್ತುನಿಷ್ಠವಾದ ಸಿಂಹಾವಲೋಕನ.
ಸಾಧ್ಯವಿದ್ದಷ್ಟು ದಿನಾಂಕ ಮುಂತಾದ ವಿವರಗಳೊಂದಿಗೆ ನಿಜವಾದ ವರದಿಗಳ, ಪ್ರಸಂಗಗಳ ಬಳಕೆ.
ಮಾನವೀಯತೆಯನ್ನು, ಉನ್ನತ ಪತ್ರಿಕಾಧರ್ಮವನ್ನು ಎತ್ತಿ ಹಿಡಿಯುವ ಪತ್ರಕರ್ತರ, ಮಾಧ್ಯಮಗಳ ಕೊಡುಗೆಯ ಸ್ಮರಣೆ.
ಅಹಿತಕರವಾದ, ಪ್ರತಿಕೂಲಕರವಾದ ಸಂಗತಿಗಳ ಮುಲಾಜಿಲ್ಲದ ವಿಮರ್ಶೆ.
ಸುದ್ದಿಗಾಗಿ ಸ್ವಾಭಿಮಾನವನ್ನೂ ಬಲಿ ಕೊಟ್ಟವರ, ಸ್ವಾಭಿಮಾನಕ್ಕಾಗಿ ತಮ್ಮ ವೃತ್ತಿಭವಿಷ್ಯವನ್ನೇ ಬಲಿ ಕೊಟ್ಟವರ, ದನಿಯಿಲ್ಲದವರಿಗೆ ದನಿಯಾದವರ, ದನಿಯಾಗಬೇಕಾದರೂ ಆಗದವರ ಉದಾಹರಣೆಗಳು.
ನಮ್ಮ ವೃತ್ತಿಯಲ್ಲಿ ನಡೆದ ಮಾರ್ಮಿಕ, ಸ್ವಾರಸ್ಯಕರ, ಬೋಧಪ್ರದ ಘಟನೆಗಳ ಪ್ರ್ರಸ್ತಾಪ.
ಭಾರತೀಯ ಪತ್ರಿಕಾ ಮಂಡಳಿಯ ಅಭಿಪ್ರಾಯಗಳ, ಅದರ ಕಾರ್ಯನಿರ್ವಹಣೆಯ, ಮಂಡಳಿಯ ಕೈಬಲಪಡಿಸುವ ಅಗತ್ಯದ, ಅದು ರೂಪಿಸಿರುವ, ಇಂದು ನಮಗೆ ಅವಶ್ಯವಾಗಿ ಬೇಕಿರುವ ಮಾರ್ಗಸೂಚಿಗಳ ವಿಪುಲವಾದ ಉಲ್ಲೇಖ.
ಇತಿ-ಮಿತಿಗಳಿಲ್ಲದ, ಹಿತ-ಮಿತವಾದ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ, ಮೌಲ್ಯಗಳನ್ನು ಮತ್ತೆ ತರಲು ಮಾಧ್ಯಮದವರಿಂದ ಆತ್ಮಾವಲೋಕನಕ್ಕಾಗಿ, ಸ್ವಯಂನಿಯಂತ್ರಣಕ್ಕಾಗಿ ಆಗ್ರಹ.

 ಪುಸ್ತಕದಲ್ಲಿ ಬಂದಿರುವ ಕೆಲವು ನಿದರ್ಶನಗಳು:

ಒಂದು ಲೋಕ ಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಮತಎಣಿಕೆಯ ಕೇಂದ್ರಕ್ಕೆ ರಾಜ್ಯದ ಮಾಜಿ ಮುಖ್ಯ ಮಂತ್ರಿಯೊಬ್ಬರ ಹಠಾತ್ ಆಗಮನ. ಟಿವಿ ಕೆಮರಾಗಳ ಮುಂದೆ ತಮ್ಮ ಮೋಹಕ ವಿಖ್ಯಾತ ನಗೆಯೊಂದಿಗೆ ಪ್ರತಿಕ್ರಿಯೆ. ಮುದ್ರಣ ಮಾಧ್ಯಮದವರತ್ತ ತಿರುಗಿಯೂ ನೋಡದೆ, ಶಿಷ್ಟಾಚಾರದ ಸಲುವಾಗಿಯಾದರೂ ಒಂದು ಮಾತನ್ನಾಡದೆ, ಅಸಡ್ಡೆಯಿಂದ ಬಿರುಬಿರನೆ ಹೊರಟೇಬಿಟ್ಟರು. ಮುದ್ರಣ ಮಾಧ್ಯಮದವರು ಈ ಅವಮಾನವನ್ನು ನುಂಗಿಕೊಂಡೂ ಅವರ ಹಿಂದೆ ಓಡಿದರು.



ವ್ಯಂಗ್ಯ ಚಿತ್ರ: ವಾಮನ್

2011 ಕೊನೆಗೆ ಕೇಂದ್ರ ಸರಕಾರ ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ FDI ಗೆ ಅನುಮತಿ ನೀಡಿದಾಗ ಜನರಿಗೆ ತಿಳಿಯಬೇಕಾದದ್ದು ಈ ನಿರ್ಧಾರದಿಂದ ತಮ್ಮ ಮೇಲೆ ಏನು ಪರಿಣಾಮ? ಒಬ್ಬ ಹಿರಿಯ ಅಂಕಣಕಾರರು ಈ ನಿರ್ಧಾರದ ರಾಜಕೀಯ ಹಿನ್ನೆಲೆಯ ಬಗ್ಗೆ ಮಾತ್ರ ಬರೆದರು. ಜನ-ಸಾಮಾನ್ಯರ ಮೇಲಾಗುವ ಪರಿಣಾಮ ಅವರ ಕಣ್ಣಿಗೆ ಬಿದ್ದಂತೆ ಕಾಣಲಿಲ್ಲ.

ಬೆಂಗಳೂರಿನ ಹತ್ತಿರದ ಬಸವಪುರದಲ್ಲಿ ಒಂದು ಕಲ್ಲುಗಣಿಯ ಸುಮಾರು 300 ಮಂದಿ ಕಾರ್ಮಿಕ ಜೀತದಾಳುಗಳ ನಿಜವಾಗಿಯೂ ನಡೆದ ಬವಣೆಯನ್ನು ಸ್ಟಿಂಗ್ ಆಪರೇಶನ್ ಮೂಲಕ ಮಾಧ್ಯಮದವರು ಬೆಳಕಿಗೆ ತಂದರು. ಆದರೆ ಭಾಜಪದ ಒಬ್ಬ ಹಳೆಯ ಅಧ್ಯಕ್ಷ ಬಂಗಾರು ಲಕ್ಷ್ಮಣ ಅವರನ್ನು ಲಂಚಗುಳಿತನ ಪ್ರಕರಣದಲ್ಲಿ ಸಿಕ್ಕಿಸಲು ನಡೆಯದಿರುವ ಘಟನೆಯ ಅಣಕು ಸ್ಟಿಂಗ್ ಆಪರೇಶನ್ ನಡೆಸಲಾಯಿತು ಎಂದು ಆಪಾದಿಸಲಾಗುತ್ತದೆ.

70ರ ದಶಕದ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರಿನಿಂದ ಉಪಚುನಾವಣೆಯಲ್ಲಿ ಲೋಕ ಸಭೆಗೆ ಆಯ್ಕೆಯಾದರು. ಇಂದಿರಾ ಗೆಲ್ಲುವ ಚಾನ್ಸ್ ಇದ್ದುದು ಆಗ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪಾದಕರಾದ, ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿ ಜೈಲಿಗೆ ಹೋದ ದಿಟ್ಟ ಪತ್ರಕರ್ತ ವಿ ಕೆ. ನರಸಿಂಹನ್‍ರಿಗೆ ನಿರಾಸೆ ಮಾಡಿದ್ದು ಸಹಜವೇ. ಆದರೆ ಉಪಚುನಾವಣಾಪೂರ್ವ ಸಮೀಕ್ಷೆಯ ನನ್ನ ವರದಿಯನ್ನು, ನನಗೆ ಗೊತ್ತಿಲ್ಲದಂತೆ, ಇಂದಿರಾರವರಿಗೆ ಸ್ವಲ್ಪ ಪ್ರತಿಕೂಲವಾಗುವಂತೆ ಬದಲಿಸಿದ್ದಕ್ಕಾಗಿ ತಮ್ಮ ಸಹಾಯಕ ಸಂಪಾದಕರನ್ನು ನರಸಿಂಹನ್ ತರಾಟೆಗೆ ತೆಗೆದುಕೊಂಡರು.

ಒಂದು ಚುನಾವಣೆ ಸಮಯ ಒಬ್ಬ ಮಧ್ಯ ವಯಸ್ಸಿನ ಮಹಿಳಾ ಚುನಾವಣಾಧಿಕಾರಿ ಮತಗಟ್ಟೆಗೆ ನಡೆದಿದ್ದಳು. ಹೆಗಲ ಮೇಲೆ ಭಾರವಾದ ಮತಯಂತ್ರಗಳು. ಏದುಸಿರು ಬಿಡುತ್ತಿದ್ದಳು. ಇಂಥ ಮಾನವೀಯ ಘಟನೆಗಳಿಗಿಂತ ಹೆಚ್ಚು ಮಹತ್ವ ಪಡೆದದ್ದು ನಮ್ಮ ನಾಯಕರು ಮತಗಟ್ಟ್ಟೆಗಳಿಗೆ ಹೋಗಿ ಮತ ಹಾಕುವ, ಸುದ್ದಿಯ ಲವಲೇಶವೂ ಇಲ್ಲದ, ಅರ್ಥಹೀನವಾದ ಸರ್ವೇಸಾಮಾನ್ಯವಾದ ಚಿತ್ರಗಳು.



ವ್ಯಂಗ್ಯ ಚಿತ್ರ: ವಾಮನ್

2010ರ ಮಧ್ಯದಲ್ಲಿ ನಕ್ಷಲೀಯರು ಒಂದು ರೈಲ್ವೇ ಸ್ಟೇಶನ್ನಿನ ಮೇಲೆ ದಾಳಿ ನಡೆಸಿ ಅದರ ಸ್ಟೇಶನ್ ಮಾಸ್ತರರನ್ನು ಅಪಹರಿಸಿದರು. ಒಬ್ಬ ಯಃಕಶ್ಚಿತ್ ಸ್ಟೇಶನ್ ಮಾಸ್ತರ ತಾನೇ? ಅವರ ಜೀವಕ್ಕೆ ಏನು ಬೆಲೆ? ಪತ್ರಿಕೆಗಳಲ್ಲಿ ಬರುವ ಫಿಲರ್‍ಗಳಿಗೆ ಇರುವ ಬೆಲೆ. ಅವರ ಅಪಹರಣ ಪ್ರಕಟಗೊಂಡದ್ದು ಫಿಲರ್ ಎಂದೇ!

ಒಬ್ಬ ಪತ್ರಕರ್ತರು (ಅವರು ಇಂದಿಲ್ಲ.) ಒಂದು ದಿನ ತಮ್ಮ ಪತ್ರಿಕೆಗೆ ಅಪರಾಧ ವರದಿಗಳನ್ನು ಕಲೆ ಹಾಕಲು ತಮ್ಮ ಸೋದರ ಪತ್ರಿಕೆಯ ಅಪರಾಧ ವರದಿಗಾರರನ್ನು ಸಂಧಿಸಿದರು. ಸೋದರ ಪತ್ರಿಕೆ ವರದಿಗಾರರು ತಮಾಷೆಯಿಂದ “ಇವತ್ತು ನೀವೇನಾ ಕ್ರಿಮಿನಲ್?” ಎಂದರು. ತಕ್ಷಣ “ಹಂಗಾಮಿ ಅಪರಾಧ ವರದಿಗಾರರು” ಕೋಪದಿಂದ ದಪ್‍ದಪ್ ಎಂದು ಕಾಲು ಬಡಿಯುತ್ತ ಹೊರಟೇ ಹೋದರು. ಬೇರೆ ಬೇರೆ ಪತ್ರಿಕೆಗಳಲ್ಲಿ ನಿಯಮಿತವಾಗಿ ಅಪರಾಧ ವರದಿ ಮಾಡುತ್ತಿದ್ದ ಪತ್ರಕರ್ತರು ತಮಾಷೆಯಿಂದ ಒಬ್ಬರನ್ನೊಬ್ಬರು ಕ್ರಿಮಿನಲ್ ಎಂದು ಕರೆಯುತ್ತಿದ್ದರು. ಸೋದರ ಪತ್ರಿಕೆಯ ಆ ಸಹೋದ್ಯೋಗಿ ಅಭ್ಯಾಸ ಬಲದಿಂದ ಹಾಗೆಯೇ ಹಾಸ್ಯ ಮಾಡಿದ್ದರು.

“ಬೆಟ್ಟದಾ ಮೇಲೊಂದು ಮನೆಯ ಮಾಡಿ...” ಎಂಬ ವಚನವನ್ನು ಅಕ್ಕ ಮಹಾದೇವಿ ಪತ್ರಕರ್ತರಿಗಾಗಿಯೇ ಬರೆದಂತೆ ಭಾಸವಾಗಬಹುದು. ಈ ವೃತ್ತಿಯನ್ನು ಸೇರಿದ ಮೇಲೆ ಅಪಾಯಗಳಿಗೆ “ಅಂಜಿ-ದೊಡೆ ಎಂತಯ್ಯಾ?”. ಅಪಾಯಗಳಿಗೆ ತಲೆಕೊಟ್ಟು ವರದಿ ಮಾಡುವುದರಲ್ಲಿ ಥ್ರಿಲ್ ಇದೆ. ಅನುಭವಿಸ-ಬೇಕು. ಯಾವ ತರಬೇತಿ ತರಗತಿಗಳಲ್ಲಿಯೂ ಬೋಧಿಸಲಾಗದು.

“ದೇಶವನ್ನು ಸುತ್ತುವುದರಿಂದ, ತಿಳಿದವರ ಸಹವಾಸದಿಂದ ಬುದ್ಧಿಯು ನೀರಿನಲ್ಲಿ ಬಿದ್ದ ಎಣ್ಣೆಯ ಹನಿಯಂತೆ ವಿಸ್ತಾರವಾಗುತ್ತದೆ.”-ಸಂಸ್ಕøತದ ಒಂದು ಸುಂದರ ಲೋಕಾನುಭವದ ಸುಭಾಷಿತ ಹೇಳುತ್ತದೆ. “ಮಾಧ್ಯಮಗಳಿಂದಲೂ ವಿಸ್ತಾರವಾಗುತ್ತದೆ.” ಎಂದು ಸೇರಿಸಬೇಕು.

ಅಷ್ಟು ದೊಡ್ಡದು ಮಾಧ್ಯಮಗಳ ಪಾತ್ರ. ಅಷ್ಟೇ ದೊಡ್ಡದು ಅವುಗಳ ಹೊಣೆಯೂ ಕೂಡ.

* * * *


ಪುಸ್ತಕದ ಮುಖಪುಟ

ಪುಸ್ತಕಕ್ಕೆ ಬಂದ ಕೆಲವು ಸಂದೇಶಗಳು, ಪ್ರತಿಕ್ರಿಯೆಗಳು :

ಡಾ ಎ ಸೂರ್ಯಪ್ರಕಾಶ, ಅಧ್ಯಕ್ಷರು, ಪ್ರಸಾರ ಭಾರತಿ, ದಿಲ್ಲಿ: “ದಶಕಗಳ ಕಾಲ ರಾಜಕೀಯವನ್ನೂ ಆಡಳಿತವನ್ನೂ ತೀರ ಹತ್ತಿರದಿಂದ ನೋಡಿದ ಮಾಧ್ಯಮರಂಗದ ಧೀಮಂತರೊಬ್ಬರು ಈ ಪುಸ್ತಕವನ್ನು ಬರೆದಿದ್ದಾರೆ. ಹೀಗಾಗಿ ಅವರಿಗೆ ಮಾಧ್ಯಮ ಸಂಘಟನೆಗಳ ಹಾಗೂ ಮಾಧ್ಯಮವೃತ್ತಿಯವರ ಆಳವಾದ ಒಳಅರಿವು ಇದೆ.”

ಪಿ ಜಿ ಆರ್ ಸಿಂಧ್ಯ, ಕರ್ನಾಟಕದ  ಮಾಜಿ ಮಂತ್ರಿಗಳು : “ಪತ್ರಿಕಾ ರಂಗದ ಮೌಲ್ಯಗಳು ಕುಸಿಯುತ್ತಿವೆಯೆಂಬ ಆತಂಕವಿರುವ ಈ ಸನ್ನಿವೇಶದಲ್ಲಿ ಪತ್ರಿಕೋದ್ಯಮಿಯಾಗಿ 5-6 ದಶಕಗಳನ್ನು ಕ್ರಮಿಸಿರುವ ತಮ್ಮ ಅನುಭವಗಳು ಮತ್ತು ಸಲಹೆಗಳು ಪತ್ರಿಕೋದ್ಯಮದ ನೈತಿಕತೆಯನ್ನು ಹೆಚ್ಚಿಸಲು ಹಾಗೂ ಯುವ ಪತ್ರಕರ್ತರಿಗೆ ಮಾರ್ಗದರ್ಶಕವಾಗಲು ಸಹಕಾರಿಯಾಗುತ್ತವೆಯೆಂದು ಆಶಿಸುತ್ತೇನೆ.”

ಪ್ರಹ್ಲಾದ ಕುಳಲಿ, ಹಿರಿಯ ಪತ್ರಕರ್ತರು : “ಮಾಧ್ಯಮ ರಂಗದ ಅಂತರಂಗದ ನೈಜ ಚಿತ್ರಣ ಸಿ ಟಿ ಜೋಶಿಯವರ ಈ ಗ್ರಂಥ ವಾಚನದಿಂದ ಕಂಡು ಬರುತ್ತದೆ ಎಂದು ಹೇಳಬಹುದಾಗಿದೆ.”

ರಘುರಾಮ, ಐಟಿ ವೃತ್ತಿಪರರು: “ಪತ್ರಿಕೋದ್ಯಮ. ಅದು ಮತ್ತೆ ಸುವರ್ಣ ಯುಗವನ್ನು ನೋಡೀತೆಂದು ನಾನು ಆಶಿಸುತ್ತೇನೆ”

ವಿಲಾಸ ಕೆ, ಹಿತೈಷಿಗಳು: “ ನನ್ನಂತಹ ಸಾಮಾನ್ಯನಾಗಲೀ, ಪತ್ರಿಕೋದ್ಯಮದ ಗಂಭೀರ ವಿದ್ಯಾರ್ಥಿಯಾಗಲೀ ಇದರಲ್ಲಿ ಕುತೂಹಲಕರವಾದುದನ್ನು ಪ್ರಸ್ತುತವಾದುದನ್ನು ಕಾಣುತ್ತಾರೆ. ಮತ್ತು ತಾದಾತ್ಮ್ಯವಾದುದನ್ನು ಹೊಂದುತ್ತಾರೆ.”

ಶೃತಿ, ಹಿತೈಷಿಗಳು: “ಇಂದಿನ ಸನ್ನಿವೇಶಕ್ಕೆ ತುಂಬ ಪ್ರಸ್ತುತವಾದುದು.”

ಅಲ್ಲದೆ, ಜಿ ಸುಬ್ರಾಯ ಭಟ್, ರಂಗಕರ್ಮಿಗಳು, ವಿಂಗ್ ಕಮಾಂಡರ್ (ನಿವೃತ್ತ) ಜಿ ಬಿ ಅತ್ರಿ , ಹಿರಿಯ ಪತ್ರಕರ್ತರಾದ ಪಿ ರಾಮಯ್ಯ, ಎಸ್‍ ಎಸ್‍ ಎನ್‍ ಶಾಸ್ತ್ರಿ, ಪಾಂಡುರಂಗ ಶಾಸ್ತ್ರ್ತಿ, ಹಿರಿಯ ಮಾಧ್ಯಮ ಶಿಕ್ಷಕ ಡಾ ಹಾಲಸ್ವಾಮಿ ಕೆ ಜಿ, ಹಿರಿಯ ಜಾಹೀರಾತು ವೃತ್ತಿಪರ ಎಸ್‍ ಎಸ್ ದೇಸಾಯಿ, ಇ-ಕಾಮರ್ಸ್ ವೃತ್ತಿಪರ ಜಿ ಆರ್ ರಾಮಚಂದ್ರನ್ ಮತ್ತು ಇವರೆಲ್ಲರೂ ಸಂದೇಶಗಳನ್ನು, ಪ್ರತಿಕ್ರಿಯೆಗಳನ್ನು ಕಳಿಸಿದ್ದರು.

* * * *